ದೇವರು ಎಂದಿಗೂ ಶಿಕ್ಷಿಸುವುದಿಲ್ಲ
ತಪ್ಪು ಮಾಡಿದವರನ್ನು ದೇವರು ಶಿಕ್ಷಿಸುತ್ತಾನೆ ಎಂದು ಮನುಷ್ಯರು ನಂಬುತ್ತಾರೆ. ಆದರೆ ನಿಜವಾಗಿ, ದೇವರು ಯಾರನ್ನೂ ಶಿಕ್ಷಿಸುವುದಿಲ್ಲ. ಶಿಕ್ಷೆ ಎಂಬುದು ದ್ವಂದ್ವದ ಲೋಕಕ್ಕೆ ಸೇರಿದ್ದು, ಅಂದರೆ ಒಳ್ಳೆಯದು ಮತ್ತು ಕೆಟ್ಟದ್ದು, ಯಶಸ್ಸು ಮತ್ತು ವಿಫಲತೆ, ಸುಖ ಮತ್ತು ದುಃಖ ಇವುಗಳೆಲ್ಲ ಈ ಜಗತ್ತಿಗೆ ಸಂಬಂಧಿಸಿದೆ. ದೇವರು ದೈವಿಕ ಲೋಕಕ್ಕೆ ಸೇರಿರುವುದರಿಂದ ಎಲ್ಲಾ ದ್ವಂದ್ವಗಳನ್ನೂ ಮೀರಿದವನು.
ದೈವಿಕತೆಯ ಪ್ರಕಾರ, ಶಿಕ್ಷೆ ಅಥವಾ ಪ್ರತಿಫಲದ ವ್ಯವಸ್ಥೆಯೇ ಇಲ್ಲ. ದೇವರ ಸ್ವಭಾವವು ಶುದ್ಧ, ಅನಂತ ಮತ್ತು ನಿಷ್ಪಕ್ಷಪಾತ. ಅಶುದ್ಧ ಮನಸ್ಸು ದೈವಿಕತೆಯ ಸ್ಪಂದನದಲ್ಲಿ ಇರಲು ಸಾಧ್ಯವಾಗದ ಕಾರಣ ಕಷ್ಟವನ್ನು ಅನುಭವಿಸುತ್ತದೆ. ಇದನ್ನೇ ದೇವರು ಶಿಕ್ಷಿಸುತ್ತಾನೆ ಎಂದು ಸಾಮಾನ್ಯ ಮನುಷ್ಯರು ನಂಬುತ್ತಾರೆ. ಬೆಳಕಿನಲ್ಲಿ ಕತ್ತಲೆ ಇರಲು ಸಾಧ್ಯವಿಲ್ಲವಷ್ಟೇ, ಹಾಗೆಯೇ ದೈವಿಕತೆಯಲ್ಲಿ ಅಶುದ್ಧತೆ ಇರಲು ಸಾಧ್ಯವಿಲ್ಲ.
ಸಾವಿನ ಮೊದಲು ತಮ್ಮನ್ನು ಶುದ್ಧೀಕರಿಸಿಕೊಂಡವರು ಅಂದರೆ ಸಕಾರಾತ್ಮಕ ಮತ್ತು ದೈವಿಕ ಗುಣಗಳನ್ನು ಬೆಳೆಸಿಕೊಂಡವರು ಸ್ವಾಭಾವಿಕವಾಗಿ ದೈವಿಕ ಲೋಕಕ್ಕೆ ಏರುತ್ತಾರೆ. ಅಶುದ್ಧವಾಗಿ ಅಥವಾ ನಕಾರಾತ್ಮಕವಾಗಿ ಉಳಿದವರು ಶುದ್ಧೀಕರಣ ಆಗುವವರೆಗೆ ಕೆಳಮಟ್ಟದ ಅಸ್ತಿತ್ವದಲ್ಲಿ ಅಲೆದಾಡುತ್ತಾರೆ.
ಸಕಾರಾತ್ಮಕವಾಗುವುದು ಲೌಕಿಕ ಸ್ವೀಕಾರ ಅಥವಾ ಪ್ರಶಂಸೆಗೆಗಾಗಿ ಅಲ್ಲ. ಸಕಾರಾತ್ಮಕತೆಯೇ ದೈವಿಕತೆಯ ಮಾರ್ಗ. ಇದು ಮನುಷ್ಯನ ಮನಸ್ಸನ್ನು ದೈವಿಕ ಸ್ಥಿತಿಯಾದ ಶೂನ್ಯತೆಗೆ, (ಚಿವಂ) ಪರಿವರ್ತಿಸುವ ಪ್ರಕ್ರಿಯೆ.
ಆದುದರಿಂದ, ತಪ್ಪು ಮಾಡಿದವರನ್ನು ದೇವರು ಶಿಕ್ಷಿಸುತ್ತಾನೆ ಎಂದು ನಾವು ಎಂದಿಗೂ ನಿರೀಕ್ಷಿಸಬಾರದು. ಮನುಷ್ಯನಲ್ಲಿ ಅಶುದ್ಧತೆ ಗೊಂದಲಗಳು ಇರುವುದರಿಂದ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಬಯಸುತ್ತಾರೆ. ಆದರೆ ದೇವರು ಶುದ್ಧ, ಮೌನ ಮತ್ತು ಎಲ್ಲರನ್ನೂ ನಿರೀಕ್ಷೆಗಳಿಲ್ಲದೆ ಪ್ರೀತಿಸುವವನು. ಹಾಗಾಗಿ ದ್ವಂದ್ವಾತೀತವಾದ ದೇವರು ಯಾರನ್ನು ಶಿಕ್ಷಿಸುವುದಿಲ್ಲ ಎಂದು ಹೇಳಬಹುದು.
ದೈವಿಕ ಲೋಕವು ದೇವರ ನಿಶ್ಚಲತೆಯೊಂದಿಗೆ ಒಂದಾಗಿರುವ ಶುದ್ಧ ಮತ್ತು ಸಕಾರಾತ್ಮಕ ಮನಸ್ಸುಗಳಿಗೆ ಮಾತ್ರ ಸೇರಿದೆ.
--------------
ಮೌನ: ಮೂಲ ಮತ್ತು ಅಂತಿಮ ಅಂತ್ಯ
ಮೌನವೇ ಎಲ್ಲವೂ ಹುಟ್ಟುವ ಗರ್ಭ, ಎಲ್ಲವೂ ನಾಶವಾಗುವ ಸಮಾಧಿ. ಮೌನವೇ ಅಸ್ತಿತ್ವದ ಆರಂಭ, ಮಧ್ಯ ಮತ್ತು ಅಂತ್ಯ. ಇದು ಸೃಷ್ಟಿ, ಸ್ಥಿತಿ ಮತ್ತು ಮುಕ್ತಿಯ ಹಿಂದಿರುವ ಮೂಲ ಸತ್ಯ. ಈ ಮೌನವು ಕೇವಲ ಶಬ್ದದ ಅಭಾವವಲ್ಲ, ಸಂಪೂರ್ಣ ಬ್ರಹ್ಮಾಂಡಕ್ಕೆ ಆಧಾರವಾಗಿ ನಿಂತಿದೆ.
ಚಿವಾಲಿಟಿ ಪದ್ಧತಿಯು ಅನ್ವೇಷಕನನ್ನು ಮೌನೀಕರಣ ಅಭ್ಯಾಸದ ಮೂಲಕ ಈ ಪರಮ ಮೌನವನ್ನು ತಲುಪಲು ಸಹಾಯ ಮಾಡಲು ಮಾತ್ರ ಅಸ್ತಿತ್ವದಲ್ಲಿದೆ.
ಮೌನೀಕರಣ ಅಭ್ಯಾಸದ ಉದ್ದೇಶ
ಮೌನೀಕರಣ ಎಂದರೆ ನಿಮ್ಮೊಳಗಿನ ಮೌನದ ಶಕ್ತಿಯನ್ನು ಹೆಚ್ಚಿಸುವ ಅಭ್ಯಾಸವಾಗಿದೆ. ಈ ಆಂತರಿಕ ಮೌನವು ಎಷ್ಟು ಶಕ್ತಿಯುತವಾಗಿರುತ್ತದೆ ಎಂದರೆ ಅದು ಆಲೋಚನೆಗಳನ್ನು ಮತ್ತು ಮನಸ್ಸಿನಲ್ಲಿರುವ ಮುದ್ರಣಗಳನ್ನು ನಾಶಮಾಡುತ್ತದೆ ಅಲ್ಲದೆ, ಅಶಾಂತಿಯನ್ನು ದೂರಮಾಡಿ, ಮೌನವನ್ನು ಮಾತ್ರ ಉಳಿಸುತ್ತದೆ.
ಆದ್ದರಿಂದ ಮೌನವನ್ನು ಶೂನ್ಯಕ್ಕೆ ಹೋಲಿಸುತ್ತಾರೆ. ಶೂನ್ಯವು ಏನೂ ಇಲ್ಲದಂತೆ ಕಾಣುತ್ತದೆ, ಆದರೆ ಅದರಲ್ಲಿ ಅನಂತ ಶಕ್ತಿಗಳಿವೆ. ಅದೇ ರೀತಿ ಮೌನವು ಖಾಲಿಯಂತೆ ತೋರುತ್ತದೆ, ಆದರೆ ಅದರಲ್ಲಿ ಅನಂತ ಶಕ್ತಿ ಅಡಗಿದೆ.
ಮೌನವೇ ಅತ್ಯುನ್ನತ ಆಧ್ಯಾತ್ಮಿಕ ಅಭ್ಯಾಸ
ಜಪ, ಆಚರಣೆ, ಧ್ಯಾನ, ಯೋಗ, ಪ್ರಾರ್ಥನೆ ಇತ್ಯಾದಿ ಎಲ್ಲಾ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮೌನೀಕರಣ ಅಭ್ಯಾಸವೇ ಅತ್ಯಂತ ಶುದ್ಧ ಮತ್ತು ಶ್ರೇಷ್ಠ. ಏಕೆಂದರೆ ಉಳಿದ ಎಲ್ಲಕ್ಕೂ ಶ್ರಮವಹಿಸಬೇಕು, ಆಚರಣೆ ಅಥವಾ ವಿಧಾನಗಳನ್ನು ಮಾಡಬೇಕಾಗುತ್ತದೆ. ಆದರೆ ಮೌನಕ್ಕೆ ನಿಮ್ಮ ಸಾನ್ನಿಧ್ಯ ಮಾತ್ರವೇ ಸಾಕು.
ನೀವು ಮೌನಕ್ಕೆ ಪ್ರವೇಶಿಸಿದಾಗ, ನಿಮ್ಮ ಮೂಲ ಸ್ವಭಾವಕ್ಕೆ ಪ್ರವೇಶಿಸುತ್ತೀರಿ. ಇದು ಹೊರಗಿನ ಪ್ರಯಾಣವಲ್ಲ, ಆದರೆ ಇದು ಆಂತರಿಕ ಯಾನವಾಗಿದೆ. ಇದು ಮನಸ್ಸಿನ ಶಬ್ದ ಮತ್ತು ಸಂಸ್ಕಾರದ ಪದರಗಳನ್ನು ನಾಶಮಾಡಿ ನಿಮ್ಮೊಳಗೆ ಯಾವಾಗಲೂ ಇದ್ದ ಮೂಲ ಸ್ಥಿತಿಗೆ ಹಿಂದಿರುಗುವುದು.
ಮಹಾನ್ ಮೌನಗುರುಗಳ ಪರಂಪರೆ
ಮೌನದ ಪರಂಪರೆ ಭಗವಾನ್ ಮುರುಗರಿಂದ ಆರಂಭವಾಗಿ, ಭಗವಾನ್ ದಕ್ಷಿಣಾಮೂರ್ತಿಯ ಮೂಲಕ ಪ್ರಕಾಶಮಾನವಾಗಿ ಹೊಳೆಯುತ್ತ, ಭಗವಾನ್ ದತ್ತಾತ್ರೇಯರಿಂದ ಮುಂದುವರಿಯುತ್ತದೆ. ಆಧುನಿಕ ಕಾಲದಲ್ಲಿ ಭಗವಾನ್ ಶ್ರೀ ರಮಣ ಮಹರ್ಷಿಗಳಿಂದ ತೀವ್ರವಾಗಿ ಬೆಳೆದು, ಇಂದಿನ ಜಗತ್ತಿನಲ್ಲಿ ಚಿವಗುರುಗಳಾದ ಸತ್ ಶ್ರೀ ಸುಬ್ರಹ್ಮಣ್ಯ ಶಿವ ಬಾಲನ್ ಅವರ ಮೂಲಕ ಒಂದು ವಿಧಾನವಾಗಿ ರೂಪುಗೊಂಡು ಸ್ಪಷ್ಟತೆ ಪಡೆಯುತ್ತಿದೆ.
ಚಿವಾಲಿಟಿ ಪದ್ಧತಿಯ ಅಭ್ಯಾಸಿಗಳು ನಿಜವಾಗಿಯೂ ಧನ್ಯರು. ಅವರು ಮೌನದ ಈ ಐತಿಹಾಸಿಕ ಪರಂಪರೆಯ ಭಾಗವಾಗಿದ್ದು, ಯುಗಯುಗಾಂತರಗಳಿಂದ ನಿರಂತರವಾಗಿ ಹರಿದು ಬಂದಿರುವ ಜ್ಞಾನವನ್ನು ನೇರವಾಗಿ ಸ್ವೀಕರಿಸುತ್ತಿದ್ದಾರೆ.
ಮೌನ ಮತ್ತು ಮುಕ್ತಿ
ಮುಕ್ತಿ ಎಂಬುದು ನೀವು “ಪಡೆಯುವ” ಯಾವುದೋ ವಸ್ತುವಲ್ಲ. ಅದು ಮನಸ್ಸಿನೊಳಗಿನ ಮೌನದ ಸ್ಥಿತಿ. ಮನಸ್ಸು ಆಲೋಚನೆಗಳು, ಆಸೆಗಳು, ಬಂಧನಗಳು ಮತ್ತು ನಕಾರಾತ್ಮಕತೆಯಿಂದ ಮುಕ್ತವಾದಾಗ ಮಾತ್ರ ಸಾಧಕನು ಮುಕ್ತಿಗೆ ಪ್ರವೇಶಿಸುತ್ತಾನೆ.
ಸಂಪೂರ್ಣ ಬ್ರಹ್ಮಾಂಡವೇ ಮೌನದಿಂದ ತುಂಬಿದೆ. ಪ್ರತಿಯೊಂದು ಶಬ್ದದ ಹಿಂದೆ, ಪ್ರತಿಯೊಂದು ಚಲನೆಯ ಹಿಂದೆ, ಪ್ರತಿಯೊಂದು ಆಲೋಚನೆಯ ಹಿಂದೆ, ಎಲ್ಲವನ್ನೂ ಒಟ್ಟುಗೂಡಿಸುವ ಹಿನ್ನೆಲೆಯೇ ಮೌನವಾಗಿದೆ. ಸರ್ವವ್ಯಾಪಿ ದಿವ್ಯ ಶಕ್ತಿ ಮೌನದಲ್ಲೇ ವಾಸಿಸುತ್ತದೆ. ಈ ಶಕ್ತಿಯನ್ನು ನೀವು ಆಚರಣೆ, ವಿಧಾನಗಳ ಮೂಲಕವಲ್ಲ, ಕೇವಲ ಮೌನದ ಮೂಲಕವೇ ಸಂಪರ್ಕಿಸಬೇಕು.
ಮೌನದ ಶಾಶ್ವತ, ಅಜೇಯ ಸ್ವಭಾವ
ಮೌನವನ್ನು ಎಂದಿಗೂ ನಾಶ ಮಾಡಲಾಗುವುದಿಲ್ಲ. ಅದನ್ನು ಕತ್ತರಿಸಲಾಗಲಿ, ಸುಡಲಾಗಲಿ, ತೊಳೆಯಲಾಗಲಿ, ಕಡಿಮೆ ಮಾಡಲಾಗುವುದಿಲ್ಲ. ಅದು ಶಾಶ್ವತ ಮತ್ತು ಅಚಲ. ಈ ಶಾಶ್ವತ ಮೌನವೇ ಏನೂ ಇಲ್ಲದದ್ದು, ಅದುವೇ ಚಿವಂ ಊರ್ಜೆ. ಚಿವಂ ಊರ್ಜೆ ಎಂಬುದು ಅತ್ಯುನ್ನತ ಸ್ವಭಾವದ ಮನುಷ್ಯನ ಆತ್ಮವಾಗಿದೆ. ಚಿವಂ ಎಂಬುದು ಚಿವಾಲಿಟಿ ಪದ್ಧತಿಯ ಅಂತಿಮ ಗುರಿ.
ಈ ಮೌನವನ್ನು ಅಂತರಂಗದಲ್ಲಿ ಅರಿತುಕೊಳ್ಳುವಾಗ, ಅಭ್ಯಾಸಿಯು ತನ್ನ ನಿಜವಾದ ಸ್ಥಿತಿಯನ್ನು ಚಿವಂ ಎಂದು ಅರಿಯುತ್ತಾನೆ. ಆಗ ಆಂತರಿಕ ಯಾತ್ರೆ ಪೂರ್ಣಗೊಳ್ಳುತ್ತದೆ.
--------
ಮೌನೀಕರಣವು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ
1. ಮನಸ್ಸನ್ನು ಶಾಂತಗೊಳಿಸುತ್ತದೆ
ನೀವು ಮೌನೀಕರಣ ಅಭ್ಯಾಸ ಮಾಡುವಾಗ, ಬಾಹ್ಯ ಚಲನಗಳಿಂದ ನಿಮ್ಮ ಗಮನವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೀರಿ. ದೈನಂದಿನ ಜೀವನದ ನಿರಂತರ ಶಬ್ಧ, ಆಲೋಚನೆಗಳು ಮತ್ತು ಚಿಂತೆಗಳು ಕ್ರಮೇಣ ಕಡಿಮೆಯಾಗುತ್ತವೆ. ಇದರಿಂದ ಮನಸ್ಸು ಶಾಂತವಾಗುತ್ತದೆ.
ಶಾಂತವಾದ ಮನಸ್ಸು ಸ್ವಾಭಾವಿಕವಾಗಿ ಮನಸ್ಸನ್ನು ಬಲಪಡಿಸುತ್ತದೆ. ನೀರು ನಿಶ್ಚಲವಾದಾಗ ಹೇಗೆ ಅಲೆಗಳು ಏಳುವುದಿಲ್ಲವೋ, ಹಾಗೆಯೇ ಮೌನದಲ್ಲಿ ನಿಮ್ಮ ಮನಸ್ಸು ನಿಶ್ಚಲವಾದಾಗ ಗೊಂದಲಗಳು ಕಡಿಮೆಯಾಗಿ ಸ್ಪಷ್ಟತೆ ಮತ್ತು ಗಮನ ಹೆಚ್ಚಾಗುತ್ತದೆ. ಈ ಮೂಲಭೂತ ಶಾಂತತೆಯು ಎಲ್ಲಾ ಇತರ ಮಾನಸಿಕ ಶಕ್ತಿಗಳ ಅಡಿಪಾಯವಾಗಿದೆ.
2. ಇಚ್ಛಾಶಕ್ತಿಯನ್ನು ಬಲಪಡಿಸುತ್ತದೆ
ಮೌನೀಕರಣ ಅಭ್ಯಾಸದ ಸಮಯದಲ್ಲಿ, ನಿಮ್ಮ ಮನಸ್ಸು ಸ್ವಾಭಾವಿಕವಾಗಿ ಮೌನವಾಗಿರಲು ವಿರೋಧಿಸುತ್ತದೆ. ಆಲೋಚನೆಗಳು, ಭಾವನೆಗಳು ಮತ್ತು ಪ್ರಚೋದನೆಗಳು ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತವೆ. ಪದೇ ಪದೇ ನಿಮ್ಮ ಮನಸ್ಸನ್ನು ಮೌನಕ್ಕೆ ತರುವ ಮೂಲಕ, ನೀವು ನಿಮ್ಮ ಇಚ್ಛಾಶಕ್ತಿಯನ್ನು ಸ್ನಾಯುವನ್ನು ಬಲಪಡಿಸುವ ರೀತಿಯಲ್ಲಿ ತರಬೇತಿ ಮಾಡುತ್ತೀರಿ.
ಈ ತರಬೇತಿಯ ಮೂಲಕ, ನೀವು ಗೊಂದಲಗಳನ್ನು ನಿಯಂತ್ರಿಸಲು, ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಕಷ್ಟದ ಸಂದರ್ಭಗಳಲ್ಲಿ ಆತುರದಿಂದ ಪ್ರತಿಕ್ರಿಯಿಸದಿರಲು ಸಮರ್ಥರಾಗುತ್ತೀರಿ. ನಿಮ್ಮ ಮನಸ್ಸು ಶಿಸ್ತು ಮತ್ತು ಸ್ವಯಂ ನಿಯಂತ್ರಣವನ್ನು ಕಲಿಯುತ್ತದೆ.
3. ಒತ್ತಡಕ್ಕೆ ಗುರಿಯಾಗುವುದನ್ನು ಕಡಿಮೆ ಮಾಡುತ್ತದೆ
ಸಾಮಾನ್ಯ ಮನಸ್ಸುಗಳು ಒತ್ತಡದಿಂದ ಕುಗ್ಗಿ ಹೋಗುತ್ತವೆ ಏಕೆಂದರೆ ಅವು ಕೋಪ, ಭಯ ಅಥವಾ ದುಃಖದಿಂದ ಸುಲಭವಾಗಿ ತೊಂದರೆಗೊಳಗಾಗುತ್ತವೆ. ಮೌನೀಕರಣದ ಅಭ್ಯಾಸವು ಬಾಹ್ಯ ವಾತಾವರಣಗಳಿಂದ ಅಲುಗಾಡದಂತೆ ಆಂತರಿಕ ಸ್ಥಿರತೆಯನ್ನು ನಿರ್ಮಿಸುತ್ತದೆ.
ಆಳವಾದ ಬೇರುಗಳನ್ನು ಹೊಂದಿರುವ ಮರದಂತೆ, ನೀವು ಎಂತಹ ವಿಪತ್ತುಗಳು ಬಂದರೂ ಅಲುಗಾಡದೆ ಸ್ಥಿರವಾಗಿ ಉಳಿಯುತ್ತೀರಿ. ಜೀವನದ ಬಿರುಗಾಳಿಗಳು ನಿಮ್ಮ ಸುತ್ತಲು ಜೋರಾಗಿ ಬೀಸಬಹುದು, ಆದರೆ ನಿಮ್ಮ ಆಂತರಿಕ ಮೌನ ದೃಢವಾಗಿ ಉಳಿಯುತ್ತದೆ.
4. ಮಾನಸಿಕ ದೃಢತೆಯನ್ನು ಬೆಳೆಸುತ್ತದೆ
ಮೌನವು ನಿಮ್ಮ ಭಾವನೆಗಳಿಂದ ನಿಯಂತ್ರಣಗೊಳ್ಳದೆ ಅವುಗಳನ್ನು ಗಮನಿಸಲು ಅವಕಾಶ ಮಾಡಿಕೊಡುತ್ತದೆ. ಪ್ರಚೋದನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಶಾಂತವಾಗಿ ಉತ್ತರಿಸಲು ನೀವು ಕಲಿಯುತ್ತೀರಿ.
ಈ ಮಾನಸಿಕ ದೃಢತೆಯು ವಿಫಲತೆಗಳು, ನಿರಾಶೆಗಳು ಮತ್ತು ನಷ್ಟಗಳಂತಹ ಸವಾಲುಗಳು ಬಂದಾಗ ಕುಗ್ಗದೆ ಎದುರಿಸಲು ನಿಮ್ಮ ಮನಸ್ಸನ್ನು ಬಲಪಡಿಸುತ್ತದೆ. ನೀವು ನಿಮ್ಮ ಭಾವನೆಗಳಿಗೆ ಬಲಿಯಾಗದೆ ವೀಕ್ಷಕರಾಗುತ್ತೀರಿ.
5. ಚಿವಂ ಮತ್ತು ಗುರುಗಳ ಊರ್ಜೆಗೆ ಸಂಪರ್ಕ ಕಲ್ಪಿಸುತ್ತದೆ
ನಿಯಮಿತ ಮೌನೀಕರಣ ಅಭ್ಯಾಸದ ಮೂಲಕ, ನಿಮ್ಮ ಮನಸ್ಸು ಚಿವಂನ ಊರ್ಜೆಯೊಂದಿಗೆ ಸ್ಪಂದಿಸುತ್ತದೆ. ಈ ದೈವಿಕ ಊರ್ಜೆಯು ನಿಮ್ಮ ಮಾನಸಿಕ ಸಹನಶೀಲತೆಯನ್ನು ಬಲಪಡಿಸುತ್ತದೆ, ಧೈರ್ಯ, ಮಾರ್ಗದರ್ಶನ ಮತ್ತು ಆಂತರಿಕ ಬೆಂಬಲವನ್ನು ನೀಡುತ್ತದೆ.
ನಿಮ್ಮೊಳಗೆ ಗುರುಗಳ ಉಪಸ್ಥಿತಿ ಇರುವುದರಿಂದ ಒತ್ತಡದ ಸನ್ನಿವೇಶಗಳಲ್ಲೂ ನೀವು ಸ್ಥಿರ ಮನಸ್ಸನ್ನು ಅನುಭವಿಸುತ್ತೀರಿ. ಈ ಸಂಪರ್ಕವು ನಿಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಮೀರಿದ ಸಮೃದ್ಧವಾದ ಶಕ್ತಿಯ ಮೂಲವನ್ನು ಒದಗಿಸುತ್ತದೆ.
6. ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ
ಮನಸ್ಸು ಚಲನವಿಲ್ಲದೆ ಒಂದೇ ವಿಷಯದ ಮೇಲೆ ಕೇಂದ್ರೀಕರಿಸಲು ಕಲಿಯುತ್ತದೆ, ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಬೆಳೆಸುತ್ತದೆ.
ಕೇಂದ್ರೀಕೃತ ಮನಸ್ಸು ಬಲವಾಗಿರುತ್ತದೆ ಏಕೆಂದರೆ ಅದು ಒತ್ತಡದಲ್ಲೂ ವಿಶ್ಲೇಷಿಸಲು, ಯೋಜಿಸಲು ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಮನಸ್ಸು ಸಾವಿರ ಚಲನಗಳಲ್ಲಿ ಚದುರಿ ಹೋಗದಿದ್ದರೆ ಮಾನಸಿಕ ದಕ್ಷತೆ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ.
7. ಆತ್ಮವಿಶ್ವಾಸ ಮತ್ತು ಸ್ವಯಂ ನಿಯಂತ್ರಣವನ್ನು ಬೆಳೆಸುತ್ತದೆ
ನೀವು ಹೆಚ್ಚು ಮೌನೀಕರಣ ಅಭ್ಯಾಸ ಮಾಡಿದಷ್ಟು, ನಿಮ್ಮ ಆಂತರಿಕ ಶಕ್ತಿಯನ್ನು ನೀವು ಹೆಚ್ಚು ನಂಬುತ್ತೀರಿ. ಸ್ಥಿರತೆಗೆ ನೀವು ಇನ್ನೂ ಮುಂದೆ ಬಾಹ್ಯ ಸಂದರ್ಭಗಳ ಮೇಲೆ ಅವಲಂಬಿತರಾಗುವುದಿಲ್ಲ.
ಆತ್ಮವಿಶ್ವಾಸವು ಸ್ವಾಭಾವಿಕವಾಗಿ ಬರುತ್ತದೆ ಏಕೆಂದರೆ ನಿಮ್ಮ ಮನಸ್ಸಿಗೆ ಯಾವುದೇ ಪರಿಸ್ಥಿತಿಯನ್ನು ಶಾಂತತೆ ಮತ್ತು ಸ್ಪಷ್ಟತೆಯಿಂದ ಎದುರಿಸಬಹುದು ಎಂದು ತಿಳಿದಿರುತ್ತದೆ. ಈ ಸ್ವಾವಲಂಬನೆಯು ನಿಜವಾದ ಮಾನಸಿಕ ಶಕ್ತಿಯ ವಿಶೇಷತೆಯಾಗಿದೆ.
ಸಾರಾಂಶ:
ಮೌನೀಕರಣ ಅಭ್ಯಾಸವು ಮನಸ್ಸಿಗೆ ವ್ಯಾಯಾಮಶಾಲೆಯಂತಿದೆ. ಇದು ಮನಸ್ಸನ್ನು ಶಾಂತಗೊಳಿಸುವ ಮೂಲಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ, ಇಚ್ಛಾಶಕ್ತಿಯನ್ನು ನಿರ್ಮಿಸುವ ಮೂಲಕ ಸ್ವಯಂ ನಿಯಂತ್ರಣವನ್ನು ಬಲಪಡಿಸುತ್ತದೆ, ಮತ್ತು ಒತ್ತಡವನ್ನು ಕಡಿಮೆ ಮಾಡುತ್ತಾ ಸ್ಥಿರತೆಯನ್ನು ಬೆಳೆಸುತ್ತದೆ. ಇದು ಭಾವನೆಗಳನ್ನು ಬುದ್ಧಿವಂತಿಕೆಯಿಂದ ಎದುರಿಸಲು ಸಹಾಯ ಮಾಡುತ್ತದೆ, ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ, ಮಾನಸಿಕ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಅಲುಗಾಡದ ಮಾನಸಿಕ ಶಕ್ತಿಯನ್ನು ನಿರ್ಮಿಸುತ್ತದೆ.
ಮಾನಸಿಕ ಶಕ್ತಿ ನಿಯಮಿತ ಮೌನೀಕರಣ ಅಭ್ಯಾಸದ ಸ್ವಾಭಾವಿಕ ಫಲಿತಾಂಶವಾಗಿದೆ. ಈ ಪವಿತ್ರ ಅಭ್ಯಾಸದ ಮೂಲಕ ಶಾಂತಿ, ಸ್ಥಿರತೆ, ತೀಕ್ಷ್ಣತೆ ಮತ್ತು ದೃಢತೆ ಹೆಚ್ಚಾಗಿ ಮನಸ್ಸು ಉಕ್ಕಿನಂತೆ ಗಟ್ಟಿಯಾಗುತ್ತದೆ.
No comments:
Post a Comment